ಮುಂಡರಗಿ ಭೀಮರಾವ್
 	1857ರ ಕ್ರಾಂತಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ. ಇವನ ತಾತ ಮೊಂಡಗೈ ಭೀಮರಾಯ ಡಂಬಳದ ದೇಸಾಯಿಯ ಸಚಿವನಾಗಿದ್ದ. ತಂದೆ ಪೇಶ್ವೆಯ ಕೈಕೆಳಗೆ ಅಧಿಕಾರಿಯಾಗಿದ್ದ. ಮುಂಡರಗಿ ಭೀಮರಾಯ ಹರಪನಳ್ಳಿ ಮತ್ತು ಬಳ್ಳಾರಿಗಳಲ್ಲಿ ಮಾಮಲೆದಾರ ಆಗಿದ್ದ. ಇಂಗ್ಲಿಷ್, ಮರಾಠೀ, ಕನ್ನಡ ಚೆನ್ನಾಗಿ ಬಲ್ಲವನಾಗಿದ್ದ. ತನ್ನ ಮೇಲಿನ ಬ್ರಿಟಿಷ್ ಅಧಿಕಾರಿಗಳ ನಡತೆ, ಮಾತು, ಮೇಲಾಗಿ ಅವರು ಸ್ಥಳೀಯರನ್ನು ಕೀಳಾಗಿ ಕಾಣುತ್ತಿದ್ದ ದುರಹಂಕಾರ ಪ್ರವೃತ್ತಿ ಮೊದಲಾದವುಗಳನ್ನು ಕಂಡರೆ ಕಿಡಿ ಕಿಡಿಯಾಗುತ್ತಿದ್ದ ಈತ ಸ್ವಾತಂತ್ರ್ಯ ಸಾಧನೆಗಾಗಿ ತಹತಹಪಡುತ್ತಿದ್ದ. ಆದಕಾರಣ ಬ್ರಿಟಿಷ್ ಅಧಿಕಾರಗಳಿಗೆ ಅವನ ಮೇಲೊಂದು ಕಣ್ಣಿದ್ದೇ ಇತ್ತು. ಯಾವುದೋ ಪ್ರಕರಣದಲ್ಲಿ ಭೀಮರಾಯನ ಮೇಲೆ ಇಲ್ಲದ ಸಲ್ಲ ಆರೋಪಗಳನ್ನು ಮಾಡಿ ಅವನನ್ನು ಕೆಲಸದಿಂದ ತೆಗೆದುಹಾಕಿದರು.

	ಅಂದಿನಿಂದಲೇ ಬ್ರಿಟಿಷ್ ಆಡಳಿತವನ್ನು ನಿರ್ಮೂಲ ಮಾಡಲು ಪಣತೊಟ್ಟ. 1857ರ ಮಹಾಕ್ರಾಂತಿ ಕಾಲದಲ್ಲಿ ಬ್ರಿಟಿಷರ ವಿರುದ್ಧ ಹರಡಿದ್ದ ಅಸಂತೃಪ್ತಿ. ಮೊಗಲ್ ಬಾದಷಾ ಮತ್ತು ಮರಾಠ ಸರದಾರರ ಯೋಜನೆಗಳು ಇವನಿಗೆ ಸ್ಫೂರ್ತಿಯಾದವು. ರಹಸ್ಯಾಲೋಚನೆಗಳಿಗೆ ಮೊದಲಿಟ್ಟು ಸೊರಟೂರು ದೇಸಾಯಿ ಮೂಲಕ ನಾನಾ ಸ್ನೇಹ ಸಂಪರ್ಕ ಬೆಳೆಸಿದ. ಹಮ್ಮಿಗೆ ಕೆಂಚನ ಗೌಡ, ಡಂಬಳದ ದೇಶಮುಖ. ಗೋವಿನಕೊಪ್ಪದ ದೇಸಾಯಿ-ಇವರೆಲ್ಲ ಭೀಮರಾಯನ ಅಂತರಂಗಕ್ಕೆ ಸೇರಿದರು. ಬ್ರಿಟಿಷರನ್ನು ಓಡಿಸಲು ಕ್ರಾಂತಿಯನ್ನು ಹೇಗೆ ವ್ಯವಸ್ಥೆ ಮಾಡಬೇಕು. ಜನರನ್ನು ಇದಕ್ಕೆ ಹೇಗೆ ಸಿದ್ದಗೊಳಿಸಬೇಕು. ಶಸ್ತ್ರಾಸ್ತ್ರ ಮಾಡಿ ಒಂದು ತೀರ್ಮಾನಕ್ಕೆ ಬಂದ. ನರಗುಂದದ ಬಾಬಾಸಾಹೇಬನೂ ಈ ಸಂಚಿಗೆ ಸಿದ್ಧನಾದ.

	ಭೀಮರಾಯ ಜನರ ವಿಶ್ವಾಸ ಗಳಿಸಿದ್ದ. ರಾಯಚೂರು ಜಿಲ್ಲೆಯ ಕೊಪ್ಪಳದಲ್ಲಂತೂ ಇವನ ಪ್ರಭಾವ ಅಪಾರವಾಗಿತ್ತು. ಬ್ರಿಟಿಷ್ ಅಧಿಕಾರಿಗಳು ಇವನ ಚಟುವಟಿಕೆಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದರು. 1857ರ ಆಗಸ್ಟ್ 1ರಂದು ಧಾರವಾಡ ಕಲೆಕ್ಟರ್ ತನ್ನನ್ನು ಬಂದು ನೋಡು ಎಂದು ಪತ್ರ ಬರೆದ. ಭೀಮರಾಯ ಕಲೆಕ್ಟರ್‍ನ್ನು ಗೌರವದಿಂದ ಕಂಡು, ಹಿಂತಿರುಗಿ ತನ್ನ ಬಂಡಾಯದ ಸಿದ್ಧತೆಯನ್ನು ಮುಂದುವರಿಸಿದ. ಶಸ್ತ್ರಾಸ್ತ್ರಗಳ ಸಂಗ್ರಹ ಮಾಡಲಾರಂಭಿಸಿದ. ಇದು ಹೇಗೂ ಬ್ರಿಟಿಷರಿಗೆ ಗೊತ್ತಾಯಿತು. ಡಂಬಳದ ಅಧಿಕಾರಿ ಹಮ್ಮಿಗೆಯ ಕೆಂಚಿನ ಗೌಡನ ಮನೆಯನ್ನು ಮುತ್ತಿ, ಮದ್ದುಗುಂಡುಗಳನ್ನು ವಶಪಡಿಸಿಕೊಂಡ. ತನ್ನ ಗುಪ್ತಕಾರ್ಯ ಬೆಳಕಿಗೆ ಬಂದುದನ್ನು ಗಮನಿಸಿದ ಭೀಮರಾಯ ನೇರ ಕಾರ್ಯಚರಣೆ ಆರಂಭಿಸಿದ, ರೈತಜನರಿಗೆ ಕ್ರಾಂತಿತತ್ತ್ವ ಸಾರಿದ. ಬ್ರಿಟಿಷ್ ಸರ್ಕಾರಕ್ಕೆ ಕಂದಾಯ ಕೊಡಬೇಡಿರೆಂದು ಹೇಳಿದ. ನರಗುಂದದ ದೇಸಾಯಿ, ಆನೆಗೊಂದಿಯ ಅರಸರಿಗೆ ಪತ್ರ ಬರೆದು ಹೋರಾಟಕ್ಕೆ ಅವರ ಬೆಂಬಲ ಬೇಡಿದ. ಮೊದಲು ಭೀಮರಾಯ ಮತ್ತು ಕೆಂಚನಗೌಡ ಡಂಬಳವನ್ನು ಮುತ್ತಿ ಆ ನಗರವನ್ನು ಸೂರೆಮಾಡಿದರು. ಭೀಮರಾಯ ಅಲ್ಲಿಂದ ಗದಗಕ್ಕೆ ಗದಗದಿಂದ ಕೊಪ್ಪಳಕ್ಕೆ ನಡೆದ.

	ಈ ಸುದ್ದಿ ಬ್ರಿಟಿಷರಿಗೆ ಮುಟ್ಟಿತು. ಧಾರವಾಡ, ಬಳ್ಳಾರಿ, ರಾಯಚೂರು ಕಡೆಗಳಿಂದ ಬ್ರಿಟಿಷ್ ಸೈನ್ಯಗಳು ಕೊಪ್ಪಳದ ಕಡೆ ಧಾವಿಸಿದುವು. ಹೈದರಾಬಾದಿನಿಂದ ಟೇಲರ್ ಸಾಹೇಬನ ನೇತೃತ್ವದಲ್ಲಿ ಒಂದು ದಳ ಬಂತು. ಮೇಜರ್ ಹೋಗನ್ ನೇತೃತ್ವದಲ್ಲಿದ್ದ ಬ್ರಿಟಿಷ್ ಸೈನ್ಯ ಕೊಪ್ಪಳದ ಕೋಟೆಯನ್ನು ಸುತ್ತುವರಿದು ಭೀಮರಾಯನನ್ನು ಶರಣಾಗುವಂತೆ ಆಜ್ಞೆ ಮಾಡಿತು (31-5-1858). ಆದರೆ ಭೀಮರಾಯ ಯುದ್ದಕ್ಕೇ ಸಿದ್ಧನಾದ. ಉಭಯ ಸೈನ್ಯಗಳಿಗೂ ಘೋರ ಯುದ್ಧವಾಯಿತು. ಕೆಲವು ವಂಚಕರ ಸಹಾಯದಿಂದ ಬ್ರಿಟಿಷ್ ಸೈನ್ಯ ಕೋಟೆಯೊಳಗೂ ನುಗ್ಗಿತು. ಭೀಮರಾಯ ವೀರಾವೇಶದಿಂದ ಹೋರಾಡಿ ರಣರಂಗದಲ್ಲಿ ಅಸುನೀಗಿದ (1-6-1858).												

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ